ಉಲುಘ್ ಖಾನ್
ಅಲ್ಲಾವುದ್ದೀನ್ ಖಿಲ್ಜಿಯ ಸಹೋದರ, ಅವನು ರಾಜನಾಗಲು ಈತ ಸಹಾಯ ಮಾಡಿದುದಲ್ಲದೆ ಅನಂತರ ಅವನ ರಾಜ್ಯ ವಿಸ್ತರಣೆಗೂ ನೆರವಾದ. ಅಲ್ಲಾವುದ್ದೀನನ ಆಳ್ವಿಕೆಯ ಆರಂಭದಲ್ಲಿ ಭಾರತದ ವಾಯುವ್ಯ ಭಾಗವನ್ನು ಮುತ್ತಿದ ಮಂಗೋಲರನ್ನು ಎದುರಿಸಿದ. 1297ರಲ್ಲಿ ಸುಲ್ತಾನನ ಆದೇಶದಂತೆ ಗುಜರಾತ್ ದೇಶದ ಮೇಲೆ ದಂಡೆತ್ತಿ ಹೋಗಿ ಅಲ್ಲಿಯ ದೊರೆ ಎರಡನೆಯ ಕರ್ಣದೇವರಾಯನನ್ನು ಸೋಲಿಸಿ ಆತನ ಹೆಂಡತಿ ಕಮಾಲಾದೇವಿಯನ್ನು ಅಪಹರಿಸಿಕೊಂಡು ಬಂದನೆಂದೂ. ಕರ್ಣದೇವರಾಯನೂ ಆತನ ಮಗಳು ದೇವಲದೇವಿಯೂ ದೇವಗಿರಿಯ ರಾಜನಾದ ರಾಮಚಂದ್ರದೇವನ ಆಶ್ರಯಪಡೆದರೆಂದೂ ಹೇಳಲಾಗಿದೆ. 1299ರಲ್ಲಿ ಈತ ನಜûರತ್ ಖಾನನೊಂದಿಗೆ ರಣತಂಬೂರಿಗೆ ಮುತ್ತಿಗೆ ಹಾಕಿದಾಗ ಅಲ್ಲಿನ ರಾಣಾ ಹಮೀರ್ ದೇವ ಇವರನ್ನು ಧೈರ್ಯದಿಂದ ಎದುರಿಸಿದ. ಯುದ್ಧದಲ್ಲಿ ನಜûರತ್ ಖಾನ್ ಮಡಿದ, ಉಲುಘ್‍ಖಾನ್ ಓಡಿಹೋದ. ಮರುವರ್ಷ ರಣತಂಬೂರನ್ನು ಅಲ್ಲಾವುದ್ದೀನನ ಕಡೆಯವರು ವಶಪಡಿಸಿಕೊಂಡರು. ಉಲುಘ್ ಖಾನ್ ರಣತಂಬೂರಿನ ಆಡಳಿತಾಧಿಕಾರಿಯಾಗಿ ನೇಮಕಗೊಂಡ. ಆ ವರ್ಷವೇ ಈತನು ಸತ್ತ.									
(ಎಂ.ಡಿ.ಎನ್.; ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ